ಸಹಜವಾಗಿ ಭಾನುವಾರವೆಂದರೆ ನಮ್ಮ ಮಾಮೂಲಿ ದೈನಂದಿನ ಚಟುವಟಿಕೆಯಿಂದ ಒಂದು ವಿರಾಮ, ರಜೆಯನ್ನು ಪಡೆದುಕೊಳ್ಳುವ ದಿನ. ತಡವಾಗಿ ಎದ್ದು, ಯಾವುದೇ ಕೆಲಸದ ಒತ್ತಡ ಇರದೆ ಸಾಯಂಕಾಲದವರೆಗೆ ಕಾಲಹರಣ ಮಾಡಿ ಸಂಜೆ ಶಾಪಿಂಗ್, ಸಿನೆಮಾ ಅಥವಾ ಮತ್ತೆಲ್ಲಿಗೋ ಹೋಗಿ ರಾತ್ರಿ ಒಂದು ಹೊಟೆಲ್ ಊಟ ಮುಗಿಸಿ ಮನೆಗೆ ಬಂದು ಹಾಸಿಗೆಗೆ ತಲೆ ಕೊಡುವುದು ರೂಢಿ.
ಅದೇ ಒಂದು ಭಾನುವಾರವನ್ನು ಒಂದು ಒಳ್ಳೆಯ ಕಾರ್ಯಕ್ಕೆ ಬಳಸಿದರೆ, ನಮ್ಮ ಆ ಒಂದು ದಿನ ಸಾರ್ಥಕವೆನ್ನಿಸಿಕೊಳ್ಳುತ್ತದೆ. ಅಂಥಹಾ ಸೌಭಾಗ್ಯ ನನ್ನ ಪಾಲಾಗಿತ್ತು, ಅದಕ್ಕೆ ಕಾರಣವಾದ “FHI- Fly Higher India” ಗೆ ನನ್ನ ಕೃತಜ್ಞತೆಗಳು.
“Fly Higher India” ಇದೊಂದು ಸರ್ಕಾರೇತರ ಸಂಸ್ಥೆ. ದೇಶಾದ್ಯಂತ ಇದರ ಕಾರ್ಯಗಳು ನಡೆಯುತ್ತವೆ. ಇದರಡಿಯಲ್ಲಿ ಅದೆಷ್ಟೋ ಕಾರ್ಯಕರ್ತರು ನಿರಂತರ ಕೆಲಸ ಮಾಡುತ್ತಿದ್ದಾರೆ.
ಏನು ಈ ಸಂಸ್ಥೆಯ ಕಾರ್ಯ ಎಂದರೆ: ತಿಂಗಳಲ್ಲಿ ಒಂದು ಭಾನುವಾರ ಯಾವುದಾದರು ಬಡ ಮಕ್ಕಳ ಶಾಲೆ, ಅನಾಥಾಶ್ರಮ ಅಥವಾ ವಿಕಲ ಚೇತನರಿರುವ ಕಡೆ ಹೋಗಿ ಇಡೀ ದಿನವನ್ನು ಅವರೊಟ್ಟಿಗೆ ಇದ್ದು ಅವರಿಗೆ ಆಟ ಆಡಿಸಿ, ಆಟದಲ್ಲೇ ಪಾಠವನ್ನು ಹೇಳಿಕೊಡುತ್ತ, ಊಟ ಬಡಿಸಿ, ಅವರಲ್ಲಿ ಒಂದಾಗಿ ಅವರನ್ನು ಸಂತೋಷಗೊಳಿಸಿವುದು.
ಮಕ್ಕಳಿಗೆ ಸಹಾಯವಾಗುವಂತಹ ವಸ್ತುಗಳು, ಪಠ್ಯ ಪುಸ್ತಕಗಳನ್ನು ಸಹ ವಿತರಿಸುವ ಕೆಲಸ ಕೂಡ ಈ ಸಂಸ್ಥೆಯ ಮೂಲಕ ನಡೆಯುತ್ತದೆ.
ಕೇಳಲು ತುಂಬಾ ಸಣ್ಣ ಕಾರ್ಯ ಎಂದೆನಿಸಬಹುದು, ಆದರೆ ಆ ಪುಟ್ಟ ಮಕ್ಕಳ ಮೇಲೆ ಮೂಡುವ ನಗು ನೋಡಿದಾಗ ನಾವೇ ಮಕ್ಕಳಾಗಿ ಆಡುವ ಆಸೆಯಾಗುತ್ತದೆ. ಆ ಮಕ್ಕಳ ಜೀವನದಲ್ಲಿ ಆ ಒಂದು ದಿನ ಮರೆಯಲಾಗದ ದಿನವಾಗಿರುತ್ತದೆ.
ಅದೆಷ್ಟೋ ಮಂದಿಗೆ ಸಮಾಜ ಸೇವೆ, ಅಥವಾ ಒಂದು ಉಪಯುಕ್ತ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಸೆ ಇರುತ್ತದೆ, ಆದರೆ ಹೇಗೆ, ಏನು ಎನ್ನುವುದು ತಿಳಿದಿರುವುದಿಲ್ಲ. ಅಂತವರಿಗೆ “Fly Higher India” ಬಹುದೊಡ್ಡ ಮೆಟ್ಟಿಲು.
ನಮ್ಮ ತಿಂಗಳ ಒಂದು ಭಾನುವಾರವನ್ನು ಒಂದು ಮಗುವಿನ ಮುಖದಲ್ಲಿ ನಗುವನ್ನು ಮೂಡಿಸಲು ಮುಡಿಪಾಗಿಟ್ಟು ನಮ್ಮ ದೈನಂದಿನ ಚಟುವಟಿಕೆಯಿಂದ ವಿರಾಮ ಪಡೆದುಕೊಳ್ಳೋಣ.
Commentaires